Oneindia Mobile
New Videos here on ur Mozilla -Get them!
ಕೇರಳದಲ್ಲಿದ್ದ ಗೋವರ್ಧನ್ ತಾನೇ ಶರಣಾದನಾ?
Monday, October 13 2008

ಅಕ್ಟೋಬರ್ 6ರ ರಾತ್ರಿ ಬೆಂಗಳೂರು ಹೊರವಲಯದ ರೆಸಾರ್ಟ್‌ವೊಂದರಲ್ಲಿ ಕುಡಿದ ಮತ್ತಿನಲ್ಲಿ ಸಹನಟ ವಿನೋದ್ ಕುಮಾರ್ ಎಂಬಾತನನ್ನು ಎರಡು ಗುಂಡು ಹಾರಿಸಿ ಕೊಲೆಗೈದ 'ಮಾದೇಶ' ಚಿತ್ರದ ನಿರ್ಮಾಪಕ ಗೋವರ್ಧನ ಮೂರ್ತಿ ಕರ್ನಾಟಕದ ಪೊಲೀಸರಿಗೆ ಕೇರಳದ ಕೊಚ್ಚಿಯಲ್ಲಿ ಸಿಕ್ಕಿದ್ದು ಹೇಗೆ? ಕೋಟಿ ಕೋಟಿ ಬಾಳುವ ಲ್ಯಾಂಡ್ ಡೀಲರ್ ಗೋವರ್ಧನ್ ತನ್ನ ಪ್ರಭಾವ ಬೀರಿ ಬಚಾವಾಗುತ್ತಾನಾ? ಅಮಾಯಕ ವಿನೋದ್‌ನ ಕುಟುಂಬದವರಿಗೆ ನ್ಯಾಯ ಸಿಗುತ್ತದಾ? ಕಾಲವೇ ಉತ್ತರಿಸಲಿದೆ.

ಅಂಕಣ : ರವಿ ಬೆಳಗೆರೆ

"ಇದು ಸರಂಡರ್ರೇ ಮಗಾ!" ಅಂತ ಮಾತನಾಡಿಕೊಂಡದ್ದು ಕ್ರೈಂ ರಿಪೋರ್ಟರುಗಳು. ಪೊಲೀಸರ ನಿರಂತರ ಶೋಧ, ಮಿತ್ರರ ಮನೆಗಳ ಮೇಲೆ ದಾಳಿ ಮತ್ತು ಇಂದಲ್ಲ ನಾಳೆ ಸಿಕ್ಕು ಬೀಳುತ್ತೇನೆಂಬ ಭಯದಿಂದಾಗಿ ಗೋವರ್ಧನ ಮೂರ್ತಿ ದೂರದ ಕೇರಳದಲ್ಲಿ ಕುಳಿತು ಅಲ್ಲಿಂದಲೇ ತನಗೆ ಪರಿಚಯವಿದ್ದ ರತ್ನಾಕರ ಶೆಟ್ಟಿ ಇನ್‌ಸ್ಪೆಕ್ಟರರನ್ನು ಸಂಪರ್ಕಿಸಿ, ಕರೆಸಿಕೊಂಡು ಶರಣಾದಂತೆ ಕಂಡು ಬರುತ್ತಿದೆಯಾದರೂ ಡಿಸಿಪಿ ಮಾಲಗತ್ತಿ ಯವರ ಟೀಮು ಅತ್ಯಂತ ಯಶಸ್ವಿಯಾಗಿ ಕೆಲಸ ಮಾಡಿರುವುದು ಶ್ಲಾಘನೀಯ.

ಎರಡು ಗುಂಡು ಬಿದ್ದು ವಿನೋದ್ ನೆಲಕ್ಕೆ ಕುಸಿಯುತ್ತಿದ್ದಂತೆಯೇ ಗೋವರ್ಧನ್‌ಗೆ ತಾನು ಮಾಡಿದ ಅನಾಹುತವೇನೆಂಬುದರ ಅರಿವಾಗಿದೆ. ತನ್ನನ್ನು ಕ್ಷಮಿಸುವಂತೆ ಶಂಕರ ರೆಡ್ಡಿಯ ಮುಂದೆ ಗೋಳಾಡಿದ್ದಾನೆ. ಅವನನ್ನು ಪಕ್ಕಕ್ಕೆ ತಳ್ಳಿ, ಗಾಯಗೊಂಡ ವಿನೋದ್‌ನನ್ನು ಕಾರಿಗೆ ಹಾಕಿಕೊಂಡ ಶಂಕರ ರೆಡ್ಡಿ ಅತ್ತ ಹೋಗುತ್ತಿದ್ದಂತೆಯೇ ಇತ್ತ ಶ್ರೀನಿವಾಸಮೂರ್ತಿ, ದಿನೇಶ್ ಹಾಗೂ ರಾಜೇಶ್‌ರನ್ನು ಕೂಡಿಸಿಕೊಂಡು ಇನ್ನೋವಾದಲ್ಲಿ ಚಿಕ್ಕಬಳ್ಳಾಪುರಕ್ಕೆ ಪರಾರಿಯಾಗುತ್ತಾನೆ ಗೋವರ್ಧನ್. ಅಲ್ಲಿಗೆ ಹೋಗುತ್ತಿರುವಾಗಲೇ ತನ್ನ ಶಿಷ್ಯ ಬಾಬುವಿಗೆ ಫೋನ್ ಮಾಡಿ, ಅವನಲ್ಲಿದ್ದ ಸ್ಕಾರ್ಪಿಯೋ ತರುವಂತೆ ಹೇಳುತ್ತಾನೆ. ಇನ್ನೋವಾ ಗಾಡಿಯನ್ನು ಶ್ರೀನಿವಾಸ್‌ನೊಂದಿಗೆ ವಾಪಸು ಕಳಿಸಿದ ಗೋವರ್ಧನ್, ಬಾಬು ತಂದ ಸ್ಕಾರ್ಪಿಯೋದಲ್ಲಿ ಬಾಬು, ದಿನೇಶ್ ಹಾಗೂ ರಾಜೇಶ್‌ರನ್ನು ಕರೆದುಕೊಂಡು, ಪಾಪ ಪ್ರಜ್ಞೆಯಿಂದಾಗಿಯೋ ಏನೋ ದೇವಸ್ಥಾನಗಳಿಗೆ ಸುತ್ತು ಹೊಡೆಯುತ್ತಾನೆ. ಚಿಂತಾಮಣಿ, ಶಿಡ್ಲಘಟ್ಟ, ಪಲಮನೇರು ಹಾಗೂ ವೆಲ್ಲೂರುಗಳಿಗೆ ಹೋಗಿ ಮಾರನೆಯ ಮಧ್ಯಾಹ್ನದ ಹೊತ್ತಿಗೆ ಹೊಸೂರು ರಸ್ತೆಯ ಪರಪ್ಪನ ಅಗ್ರಹಾರಕ್ಕೆ ಬರುತ್ತಾನೆ. ಅಲ್ಲಿಗೆ ಆತ ಬಂದದ್ದು ಒಂದೋ, ಪೊಲೀಸರಿಗೆ ಶರಣಾಗಲಿಕ್ಕೆ. ಅದು ಬಿಟ್ಟರೆ ಒಂದಷ್ಟು ಹಣ ಹೊಂಚಿಕೊಂಡು ಬೆಂಗಳೂರಿನಿಂದ ದೂರ ಹೊರಟು ಹೋಗುವುದಕ್ಕೆ.

ಪರಪ್ಪನ ಅಗ್ರಹಾರದ ಬಳಿಗೇ ತನ್ನ ಗಾರ್ಮೆಂಟ್ಸ್ ಮ್ಯಾನೇಜರ್ ಪ್ರಭಾಕರನನ್ನು ಕರೆಸಿಕೊಳ್ಳುವ ಗೋವರ್ಧನ್ ಅವನಿಂದ ಹತ್ತು ಸಾವಿರ ರೂಪಾಯಿ ಪಡೆದು, ಅವನ ಕೈಗೇ ಸ್ಕಾರ್ಪಿಯೋ ಕೊಟ್ಟು, ತನ್ನ ಸಹಾಯಕ ಬಾಬುವಿನೊಂದಿಗೆ ಬಸ್ಸು ಹತ್ತಿ ಕೇರಳದ ತ್ರಿಶೂರ್ ತಲುಪಿಕೊಳ್ಳುತ್ತಾನೆ. ಒಂದು ದಿನ ತ್ರಿಶೂರ್‌ನ ಲಾಡ್ಜೊಂದರಲ್ಲಿ ಉಳಿಯುವ ಬಾಬು ಮತ್ತು ಗೋವರ್ಧನ ಮೂರ್ತಿ ಮರುದಿನ ಅಲ್ಲಿಂದ 10 ಕಿ.ಮೀ. ದೂರದ ಕುಂದನೂರು ಗ್ರಾಮಕ್ಕೆ ಹೋಗಿ ದೀಪೇಶ್ ಪಿಳ್ಳೈ ಎಂಬುವವರ ಮನೆ ತಲುಪಿಕೊಳ್ಳುತ್ತಾರೆ. ಗೋವರ್ಧನ್‌ನ ಶಿಷ್ಯ ಬಾಬುವಿಗೆ ಬೆಂಗಳೂರಿನ ರಾಮಮೂರ್ತಿ ನಗರದ ಮಧು ಎಂಬ ವಿವಾಹಿತ ಮಹಿಳೆಯೊಬ್ಬಳೊಂದಿಗೆ ಸಂಬಂಧವಿದ್ದು, ಅವಳ ಮನೆಯ ಮಾಲೀಕನೇ ಕುಂದನೂರಿನ ದೀಪೇಶ್ ಪಿಳ್ಳೈ. ಹೀಗಾಗಿ ಬಾಬು ಮೂಲಕ ಗೋವರ್ಧನನಿಗೆ ಕುಂದನೂರಿನ ಮನೆಯೊಂದರಲ್ಲಿ ತಲೆಮರೆಸಿಕೊಳ್ಳುವ ಅವಕಾಶ ಸಿಗುತ್ತದೆ.

ಅತ್ತ ಗೋವರ್ಧನ ಮೂರ್ತಿ ಹಾಗೆ ಸಿಂಕ್ ಆಗುತ್ತಿದ್ದಂತೆಯೇ ಇತ್ತ ಡಿಸಿಪಿ ಬಸವರಾಜ ಮಾಲಗತ್ತಿಯವರ ಮೇಲೆ ಹಿರಿಯ ಅಧಇಕಾರಿಗಳು ಪ್ರೆಷರ್ ಬೀಳಲಾರಂಭಿಸಿತ್ತು. ಯಾವ ಕ್ಷಣದಲ್ಲಾದರೂ ಗೋವರ್ಧನ್ ದೇಶ ಬಿಟ್ಟು ಹೊರಟು ಹೋಗುತ್ತಾನೆಂಬ ಆತಂಕ ಪೊಲೀಸರಿಗಿತ್ತು. ಶಂಕರ ಬಿದರಿಯವರು ಈ ಪ್ರಕರಣವನ್ನು ಸಿಓಡಿಗೆ ಒಪ್ಪಿಸುವ ಸೂಚನೆ ನೀಡತೊಡಗಿದ್ದರು. ತಕ್ಷಣ ಅಲರ್ಟ್ ಆದ ಮಾಲಗತ್ತಿ ನಾಲ್ಕು ತಂಡಗಳನ್ನು ಮಾಡಿ ಗೋವರ್ಧನ್‌ನ ಮನೆ, ಅವನ ಸಂಬಂಧಿಕರ ಮನೆ ಹಾಗೂ ಸ್ನೇಹಿತರ ಮನೆಗಳಿಗೆ ನುಗ್ಗಿ ಕಂಡ ಕಂಡವರನ್ನು ವಿಚಾರಣೆಗೆ ಒಳಪಡಿಸತೊಡಗಿದರು. ಒಂದು ತಂಡವಂತೂ ಶಿವಮೊಗ್ಗದ ತನಕ ಹೋಗಿ ಗೋವರ್ಧನ್‌ನ ಅತ್ತಿಗೆ ತವರು ಮನೆಯವರನ್ನು ಹಿಡಿದು ವಿಚಾರಿಸತೊಡಗಿತು.

ಮೊಬೈಲ್‌ನಲ್ಲಿ ಮತಾಡಿದರೆ ಎಲ್ಲಿ ಅವು ಟ್ಯಾಪ್ ಆಗುತ್ತವೋ ಅಂದುಕೊಂಡ ಗೋವರ್ಧನ್, ತನ್ನ ಕಡೆಯವರೆಲ್ಲರ ಮೊಬೈಲುಗಳನ್ನು ಆಫ್ ಮಾಡಿಸಿ ಅವರ ಮನೆಗಳ ಲ್ಯಾಂಡ್ ಲೈನ್‌ಗಳಿಗೆ ಎಸ್ಟಿಡಿ ಬೂತುಗಳಿಗೆ ಫೋನು ಮಾಡಿ ಇಲ್ಲಿಯ ಬೆಳವಣಿಗೆಗಳ ವಿವರ ಪಡೆಯುತ್ತಿದ್ದ. ಯಾವಾಗ ಎಲ್ಲರ ಮೊಬೈಲುಗಳೂ ಕಣ್ಣುಮುಚ್ಚಿದವೋ, ಪೊಲೀಸರು ಗೋವರ್ಧನ್‌ನ ಮನೆ, ಅವನ ಮ್ಯಾನೇಜರ್ ರಮಾದೇವಿಯ ಮನೆ, ಬಾಬುವಿನ ಗೆಳತಿ ಮಧೂಳ ಮನೆಯ ಲ್ಯಾಂಡ್‌ಲೈನ್ಗಳಿಗೆ ಕಳ್ಳಗಿವಿಯಿಟ್ಟರು.

ಅಸಲಿಗೆ ಕೊಲೆ ನಡೆದಾಗ ಬಾಬು ಆ ಸ್ಥಳದಲ್ಲಿ ಇರಲಿಲ್ಲವಾದದ್ದರಿಂದ ಅವನು ಶರಣಾಗಿ ಬಿಡಬಾರದೇಕೆ ಎಂದು ಯೋಚಿಸಲಾರಂಭಿಸಿದ್ದ. ಅವನು ಫೋನಿನಲ್ಲಿ ಮಧೂಳೊಂದಿಗೆ ಮಾತನಾಡುತ್ತಿದ್ದುದಲ್ಲದೆ ತಾನಿರುವ ಜಾಗದ ಬಗ್ಗೆ ಕೆಲವು ಗೆಳೆಯರಿಗೆ ತಿಳಿವಳಿಕೆ, ಸೂಚನೆ ನೀಡತೊಡಗಿದ್ದ. ಈ ಹೊತ್ತಿಗೆ ಇಬ್ಬರಲ್ಲೂ ದುಡ್ಡು ಮುಗಿದಿತ್ತು. ಕ್ರೆಡಿಟ್ ಕಾರ್ಡ್ ಬಳಸಿ ಹಣ ಡ್ರಾ ಮಾಡಿದರೆ ಪೊಲೀಸರಿಗೆ ಸಿಗುವ ಅಪಾಯವಿತ್ತು. ಹೀಗಾಗಿ ಗೋವರ್ಧನ್ ಶಿವಮೊಗ್ಗದ ವ್ಯಾಪಾರಿ ಆಜಂ ಎಂಬುವವನಿಗೆ ಫೋನು ಮಾಡಿ 25 ಲಕ್ಷ ಬೇಕೆಂದು ಕೇಳಿದ್ದ. ಅದರಲ್ಲಿ ರಮಾದೇವಿಯ ಮೂಲಕ 10 ಲಕ್ಷವನ್ನು ವಕೀಲರಿಗೆ ತಲುಪಿಸಿ, ನಿರೀಕ್ಷಣಾ ಜಾಮೀನು ಪಡೆಯುವ ವ್ಯವಸ್ಥೆ ಮಾಡುವುದು. ಮ್ಯಾನೇಜರ್ ಪ್ರಭಾಕರ್‌ಗೆ 10 ಲಕ್ಷ ತಲುಪಿಸಿ ಅದರಿಂದ ತನ್ನ ಗಾರ್ಮೆಟ್ಸ್ ಅಬಾಧಿತವಾಗಿ ನಡೆಯುವಂತೆ ಮಾಡುವುದು. ಉಳಿದ ಐದು ಲಕ್ಷ ತಾನು ತರಿಸಿಕೊಳ್ಳುವುದು. ಇದು ಗೋವರ್ಧನ್‌ನ ಯೋಜನೆಯಾಗಿತ್ತು. ಯಾವಾಗ ಪ್ರಭಾಕರನೊಂದಿಗೆ ಆತ ಮಾತನಾಡಿದನೋ, ಪ್ರಭಾಕರ ಮನೆಯ ಫೋನು ಟ್ಯಾಪ್ ಆಗಿದ್ದರಿಂದ ಪೊಲೀಸರು ಮೊದಲು ಅವನನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಅಷ್ಟರಲ್ಲಾಗಲೇ ಮಧು ಎಂಬುವವಳು ತನ್ನ ಪರಿಚಯದ ವಿದ್ಯಾರ್ಥಿಯೊಬ್ಬನ ಮೂಲಕ ಹಣ ಕೊಟ್ಟು, ಕನ್ಯಾಕುಮಾರಿ ಎಕ್ಸ್‌ಪ್ರೆಸ್‌ನಲ್ಲಿ ಕಳಿಸಿಬಿಟ್ಟಿದ್ದಳು. ತಕ್ಷಣ ಕಿಂಗ್ ಫಿಷರ್ ಏರ್‌ಲೈನ್ಸ್‌ನಲ್ಲಿ ಕೊಚ್ಚಿನ್ ಹೋದವರು ಇನ್ಸ್‌ಪೆಕ್ಟರುಗಳಾದ ಬಾಲಕೃಷ್ಣ ಮತ್ತು ರತ್ನಾಕರ ಶೆಟ್ಟಿ. ಅತ್ತ ಅವರು ಹೋಗುತ್ತಿದ್ದಂತೆಯೇ ಇತ್ತ ಮಧು ಮತ್ತು ರಮಾದೇವಿಯವರ ಮನೆಗಳಿಗೆ ಪೊಲೀಸರು ಕಾವಲು ನಿಂತು ಬಿಡುತ್ತಾರೆ.

ಆದರೆ ರತ್ನಾಕರ ‌ಶೆಟ್ಟಿ ಮತ್ತು ಬಾಲಕೃಷ್ಣ ವಿಮಾನದಲ್ಲಿ ಹೋಗಿ ತಲುಪುವ ಹೊತ್ತಿಗೆ ತ್ರಿಶೂರ್ ಬಳಿಯ ವಡಕಂಚೇರಿ ನಿಲ್ದಾಣದಿಂದ ಆ ವಿದ್ಯಾರ್ಥಿ ಇಳಿದು ಹೊರಟು ಹೋಗಿರುತ್ತಾನೆ. ಕಡೆಗೆ ಕುಂದನೂರಿನಲ್ಲಿದ್ದ ದೀಪೇಶ್ ಪಿಳ್ಳೈ ಮನೆಯನ್ನು ಮಧೂಳ ಸಹಾಯದಿಂದ ಪತ್ತೆ ಹಚ್ಚಿ ಬಾಬು ಮತ್ತು ಗೋವರ್ಧನ್‌ರನ್ನು ಹಿಡಿದು ತಂದೆವು ಅಂತ ರತ್ನಾಕರ ಶೆಟ್ಟಿ ಹಗ್ಗ ಹೊಸೆದಿದ್ದಾರೆ. ಅತ್ತಿಬೆಲೆ ಠಾಣೆಯಲ್ಲಿದ್ದಾಗ ಗೋವರ್ಧನ್‌ನ ಲ್ಯಾಂಡ್ ಡೀಲಿಂಗ್‌ಗಳನ್ನು ಇನ್ಸ್‌ಪೆಕ್ಟರ್ ರತ್ನಾಕರ ಶೆಟ್ಟಿ 'ಖುಲ್ಲಾ' ಮಾಡಿಸಿಕೊಡುತ್ತಿದ್ದರು. ಹೀಗಾಗಿ ಅವರನ್ನೇ ನೇರವಾಗಿ ಸಂಪರ್ಕಿಸಿದ ಗೋವರ್ಧನ್ ಕೇರಳಕ್ಕೆ ಕರೆಸಿಕೊಂಡು ಸರಂಡರ್ ಆಗಿದ್ದಾನೆ ಅನ್ನುವವರೂ ಇದ್ದಾರೆ.

ಅದೇನೆ ಇರಲಿ, ಗೋವರ್ಧನ್‌ನನ್ನು ಹಿಡಿದು ತಂದಾಗ ಪೊಲೀಸ್ ಕಮೀಷನರ್ ಕಚೇರಿಯ ಬಳಿ, ಕೊಲೆಯಾದ ಯುವಕ ವಿನೋದ್‌ನ ಪರವಾಗಿ ಭಾರೀ ಪ್ರತಿಭಟನೆ ನಡೆಯಿತು. ಈಗ ಪೊಲೀಸರು ಯಾವ ರೀತಿ ಛಾರ್ಜ್‌ಷೀಟ್ ಮಾಡುತ್ತಾರೆ ಅನ್ನುವುದರ ಮೇಲೆ ಇಡೀ ಕೇಸು ನಿಂತಿದೆ.

(ಸ್ನೇಹಸೇತು : ಹಾಯ್ ಬೆಂಗಳೂರು)

ಪೂರಕ ಓದಿಗೆ
ಮಾದೇಸ ನಿರ್ಮಾಪಕ ಮೂರ್ತಿ ಕೇರಳದಲ್ಲಿ ಬಂಧನ
ವ್ಯಕ್ತಿಯೊಬ್ಬನನ್ನು ಹತ್ಯೆಗೈದ ಮಾದೇಶ ಚಿತ್ರ ನಿರ್ಮಾಪಕ
Oneindia Mobile

»Home »News  »Entertainment  »Currency  »Free Classifieds  »Cricket  »TV Schedules  »In Theatres  »Weather  »Languages  »Horoscope 

© Greynium Information Technologies Pvt. Ltd.