Oneindia Mobile
New Videos here on ur Mozilla -Get them!
ಚುನಾವಣೆ : ಅಭಿಪ್ರಾಯ ತಪ್ಪಿದ್ದೆಲ್ಲಿ ಸರಿಯಾಗಿದ್ದೆಲ್ಲಿ?
ಭಾನುವಾರ, ಮೇ 17, 2009, 16:21 [IST]

Rajeev Chandrasekhar, Rajyasabha member
15ನೇ ಲೋಕಸಭೆ ಚುನಾವಣೆ ನಡೆಯುವ ಮುನ್ನವೇ ಕೆಲ ರಾಜಕೀಯ ಪಂಡಿತರ ಮತ್ತು ಕೆಲವು ನನ್ನ ಅಭಿಪ್ರಾಯಗಳನ್ನು, ಮುನ್ಸೂಚನೆಗಳನ್ನು ಇಲ್ಲಿ ಬರೆದಿದ್ದೆ. ಅವುಗಳಲ್ಲಿ ಅನೇಕವು ಸುಳ್ಳಾಗಿವೆ. ಈಗ ನಮ್ಮ ಯಾವು ಅಭಿಪ್ರಾಯಗಳು ಸರಿಯಾಗಿವೆ ಮತ್ತು ಎಲ್ಲಿ ತಪ್ಪಿವೆ ಎಂಬುದನ್ನು ವಿಮರ್ಶಿಸೋಣ.

* ರಾಜೀವ್ ಚಂದ್ರಶೇಖರ್, ರಾಜ್ಯಸಭಾ ಸದಸ್ಯ

1. ಸಂಸತ್ತಿನಲ್ಲಿ ಯಾವ ಪಕ್ಷ ಅಥವಾ ಮೈತ್ರಿಕೂಟ ಸಂಪೂರ್ಣ ಬಹುಮತ ಪಡೆಯುವುದಿಲ್ಲ. - ಸರಿ.

2. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಬಹುಮತ ಪಡೆಯುವುದಿಲ್ಲ. - ಸರಿ.

3. 2004ರ ಚುನಾವಣೆಗೆ ಹೋಲಿಸಿದರೆ ಯುಪಿಎ ಮೈತ್ರಿಕೂಟದ ಸಂಖ್ಯಾಬಲ ಕುಗ್ಗಲಿದೆ ಮತ್ತು ಎನ್ ಡಿಎ ತನ್ನ ಸಂಖ್ಯೆಗಳನ್ನು ವೃದ್ಧಿಸಿಕೊಳ್ಳಲಿದೆ. - ಸಂಪೂರ್ಣ ತಪ್ಪು.

4. ಯುಪಿಎ ಅಂಗಪಕ್ಷಗಳಾದ ಆರ್ ಜೆಡಿ, ಸಮಾಜವಾದಿ ಪಕ್ಷ ಮತ್ತು ಡಿಎಂಕೆ ಪಕ್ಷಗಳು 2004ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಸೀಟು ಮತ್ತು ಅಸ್ತಿತ್ವವನ್ನು ಗಮನಾರ್ಹವಾಗಿ ಕಳೆದುಕೊಳ್ಳಲಿವೆ. - ಆರ್ ಜೆಡಿ ಮತ್ತು ಎಸ್ಪಿ ಕುರಿತು ಊಹೆ ಸರಿಯಾಗಿದೆ. ಡಿಎಂಕೆ ಊಹೆ ತಪ್ಪಾಗಿದೆ.

5. ಎಡರಂಗ ಸಂಪೂರ್ಣ ಬುಡಮೇಲಾಗಲಿದೆ. ಸರಿ.

6. ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯ ನಿರ್ವಹಣೆ ಸ್ಪಷ್ಟತೆಯಿಂದ ಕೂಡಿಲ್ಲ. ರಾಷ್ಟ್ರಮಟ್ಟದಲ್ಲಿ ಬಿಜೆಪಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುತ್ತದೆ. ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಫಲಿತಾಂಶ ಕಾಂಗ್ರೆಸ್ ಹಣೆಬರಹವನ್ನು ನಿರ್ಧರಿಸಲಿದೆ. ಬಿಜೆಪಿಗೆ ಸಂಬಂಧಿಸಿದ ಅಭಿಪ್ರಾಯ ತಪ್ಪಾಗಿದೆ. ಆದರೆ ಯುಪಿ, ಆಂಧ್ರ ಮತ್ತು ರಾಜಸ್ಥಾನದ ಫಲಿತಾಂಶ ನಮ್ಮ ಅಭಿಪ್ರಾಯ ಸರಿಯಾಗಿಸಿದೆ.

7. ಈ ಚುನಾವಣೆ ಉತ್ತರ ಪ್ರದೇಶದ ರಾಜಕೀಯ ನಕ್ಷೆಯನ್ನೇ ಬದಲಾಯಿಸಲಿದೆ. ಅನೇಕ ವರ್ಷಗಳ ನಂತರ ಪ್ರಥಮ ಬಾರಿಗೆ ಎಸ್ಪಿ ಮತ್ತು ಬಿಎಸ್ಪಿಯ ಪ್ರಾಬಲ್ಯ ಕುಸಿಯಲಿದೆ ಮತ್ತು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿವೆ. - ತಪ್ಪು.

8. ಈ ಚುನಾವಣೆಯಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ರಾಜಶೇಖರ ರೆಡ್ಡಿ ಮತ್ತು ಓರಿಸ್ಸಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಹಣೆಬರಹ ನಿರ್ಧಾರವಾಗಲಿದೆ. ಆಂಧ್ರದಲ್ಲಿ ಕಾಂಗ್ರೆಸ್ ಮುಗ್ಗರಿಸಲಿದೆ ಮತ್ತು ಸರಕಾರ ರಚಿಸುವಲ್ಲಿ ಚಿರಂಜೀವಿ ಪ್ರಮುಖ ಪಾತ್ರ ವಹಿಸಲಿದ್ದಾರೆ. - ತಪ್ಪು. ಆಂಧ್ರದಲ್ಲಿ ಕಾಂಗ್ರೆಸ್ ಬಹುಮತ ಪಡೆದಿದೆ.

9. ನವೀನ್ ಪಟ್ನಾಯಕ್ ಓರಿಸ್ಸಾದಲ್ಲಿ ಸರಳ ಬಹುಮತ ಪಡೆಯುವುದಿಲ್ಲ. ಸರಕಾರ ರಚಿಸಲು ಕಾಂಗ್ರೆಸ್ ಅಥವಾ ಬಿಜೆಪಿ ಬೆಂಬಲಕ್ಕೆ ಬಿಜು ಜನತಾದಳ ಅಗಲಾಚಲಿದೆ. ಪ್ರತಿಯಾಗಿ ಬಿಜೆಡಿ ಕೇಂದ್ರದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಗೆ ಬೆಂಬಲ ನೀಡಲಿದೆ. - ತಪ್ಪು. ಓರಿಸ್ಸಾದಲ್ಲಿ ಬಿಜೆಡಿ ಸರಳ ಬಹುಮತ ಪಡೆದಿದೆ.

10. ಚುನಾವಣೆಯ ನಂತರ ಯಾವ ರಾಜಕೀಯ ಪಕ್ಷವನ್ನು, ಮೈತ್ರಿಕೂಟವನ್ನು ಸರಕಾರ ರಚಿಸಲು ಆಹ್ವಾನಿಸಬೇಕು ಎಂಬ ಬಗ್ಗೆ ರಾಷ್ಟ್ರಪತಿ ದ್ವಂದ್ವಕ್ಕೆ ಸಿಲುಕಲಿದ್ದಾರೆ. ಅತಿ ದೊಡ್ಡ ಪಕ್ಷವನ್ನು ಕರೆಯಬೇಕೋ ಅಥವಾ ಅತಿ ದೊಡ್ಡ ಚುನಾವಣಾಮುನ್ನ ಮೈತ್ರಿಕೂಟವನ್ನು ಕರೆಯಬೇಕೋ ಎಂಬ ಬಗ್ಗೆ ಅಧಿಕಾರವನ್ನು ಬಳಸುವ ಅಥವಾ ದುರ್ಬಳಸುವಂಥ ಪರಿಸ್ಥಿತಿ ಬರಲಿದೆ. - ಸಂಪೂರ್ಣ ತಪ್ಪು. ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

11. ಪ್ರಧಾನಿ ಯಾರಾಗಲಿದ್ದಾರೆ? ಈ ಪ್ರಶ್ನೆಗೆ ಅನೇಕ ಉತ್ತರಗಳು ಲಭಿಸಲಿವೆ. ಆದ್ದರಿಂದ ಫಲಿತಾಂಶ ಬರುವವರೆಗೆ ಕಾಯೋಣ. - ಉತ್ತರ ಸುಲಭವಾಗಿ ಲಭಿಸಿದೆ, ಮನಮೋಹನ ಸಿಂಗ್.

ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲು ಮತ್ತು ಕಾಂಗ್ರೆಸ್ಸಿನ ಅದ್ಭುತ ಗೆಲುವಿನ ಬಗ್ಗೆ ಅನೇಕ ಮತ್ತು ವಿಭಿನ್ನ ವಿಶ್ಲೇಷಣೆಗಳು ಮತ್ತು ಸಿದ್ಧಾಂತಗಳು ಮಂಡನೆಯಾಗಲಿವೆ. ಎಲ್ಲಕ್ಕಿಂತ ಹೆಚ್ಚಾಗಿ, ಭಾರತದ ಜನತೆ ಅತ್ಯಂತ ಸ್ಪಷ್ಟವಾಗಿ ಮತ್ತು ವಿಚಾರಪೂರ್ವಕವಾಗಿ ಸರಕಾರವನ್ನು ಆಯ್ಕೆ ಮಾಡಿದ್ದಾರೆ. ಈ ಜನಮತ ಹಿಂದಿನ ಅಂದರೆ 2004ರ ಚುನಾವಣೆಗಿಂತ ಬಲಿಷ್ಠವಾಗಿದೆ ಎಂಬುದು ಅತ್ಯಂತ ಪ್ರಶಂಸನೀಯ ಸಂಗತಿ. ಕಾಂಗ್ರೆಸ್ ಪಕ್ಷಕ್ಕೆ ಈಬಾರಿ ಕಡಿಮೆ ಮಿತ್ರಪಕ್ಷಗಳ ಬೆಂಬಲದ ಅಗತ್ಯವಿದೆ. ಮಿತ್ರಪಕ್ಷಗಳ ಹಂಗಿಲ್ಲದೆ ಮತ್ತು ಒತ್ತಡವಿಲ್ಲದೆ ಸರಕಾರ ಮುನ್ನಡೆಸುವ ಅವಕಾಶ ಯುಪಿಎ ಪಕ್ಷಕ್ಕೆ ಲಭಿಸಿದೆ.



»Home »News  »Entertainment  »Currency  »Free Classifieds  »Cricket  »TV Schedules  »In Theatres  »Weather  »Languages  »Horoscope 

© Greynium Information Technologies Pvt. Ltd.