ಬುಧವಾರ, ಜುಲೈ 1, 2009, 10:43 [IST]
ಬೆಂಗಳೂರು, ಜು. 1 : ಅಧಿಕಾರಿಗಳ ಸಭೆ ನಡೆಸುವ ವಿಷಯದಲ್ಲಿ ಉದ್ಭವಿಸಿರುವ ಬಿಕ್ಕಟ್ಟು ನಿವಾರಣೆಗೆ ಮಧ್ಯೆ ಪ್ರವೇಶಿಸುವಂತೆ ವಿಧಾನಸಭೆ ಸ್ಪೀಕರ್ ಅವರನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ವಿವಾದಿತ ಸುತ್ತೋಲೆ ಮೂಲಕ ಸಂವಿಧಾನಬದ್ಧ ಪ್ರತಿಪಕ್ಷ ನಾಯಕನ ಹುದ್ದೆಯನ್ನು ಸರಕಾರ ಅಪಮಾನಿಸಿದೆ. ತಕ್ಷಣ ಸುತ್ತೋಲೆ ಹಿಂದಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ಪ್ರಕರಣ ತಾರ್ಕಿಕ ಅಂತ್ಯ ಕಾಣುವ ತನಕ ಹೋರಾಡಬೇಕಾಗುತ್ತದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು. ಮುಖ್ಯಮಂತ್ರಿ ಯಡಿಯೂರಪ್ಪ ಈ ಹಿಂದೆ ಪ್ರತಿಪಕ್ಷ ನಾಯಕರಾಗಿದ್ದಾಗ ನೀಡಿರುವ ಹೇಳಿಕೆ, ಮಾಡಿರುವ ಭಾಷಣಗಳನ್ನು ನೆನಪಿಸಿಕೊಳ್ಳಲಿ. ಇಲ್ಲವೇ ಸಂಸದ ಡಿ ಬಿ ಚಂದ್ರೇಗೌಡ ಅಥವಾ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ ಕೊಟ್ಟು ಓದಿಸಿ ಅವರಿಂದ ಮಾಹಿತಿ ಪಡೆಯಲಿ. ಒಂದು ವೇಳೆ ಪ್ರತಿಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಅಧಿಕಾರಿಗಳ ಸಭೆ ಮಾಡಿ ಮಾಹಿತಿ ಪಡೆದಿಲ್ಲ ಎಂದಾದರೆ, ಅವರು ತಮ್ಮ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಿಲ್ಲ ಎಂದು ಭಾವಿಸಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.
ಪ್ರತಿಪಕ್ಷ ನಾಯಕ ಸ್ಥಾನ ಸಂವಿಧಾನಬದ್ಧ ಹುದ್ದೆ. ಬಜೆಟ್ ಆದಿಯಾಗಿ ಎಲ್ಲ ಕಾರ್ಯಕ್ರಮಗಳ ಅನುಷ್ಠಾನದ ಪರಿಶೀಲನೆಯಲ್ಲಿಯೂ ತಮ್ಮ ಜವಾಬ್ದಾರಿ. ಅನುಷ್ಠಾನದಲ್ಲಿನ ಲೋಪಗಳನ್ನು ತಿಳಿದು ಸರಕಾರದ ಗಮನಕ್ಕೆ ತರಬೇಕು. ಅದಕ್ಕಾಗಿ ಪ್ರವಾಸ ಮಾಡಿ ಮಾಹಿತಿ ಪಡೆಯಬೇಕು. ಅಧಿಕಾರಿಗಳು ಮಾಹಿತಿ ನೀಡದಿದ್ದಲ್ಲಿ, ನಾವಾದರೂ ಏಕೆ ಪ್ರವಾಸ ಮಾಡಬೇಕು ? ಎಂದು ಪ್ರಶ್ನಿಸಿದ ಅವರು ಸರಕಾರದ ಸುತ್ತೋಲೆ ಸಂವಿಧಾನ ವಿರೋಧಿ ಎಂದರು.
(ದಟ್ಸ್ ಕನ್ನಡ ವಾರ್ತೆ)