ಶುಕ್ರವಾರ, ನವೆಂಬರ್ 6, 2009, 13:18 [IST]
ಬೆಂಗಳೂರು, ನ. 6 : ಅರಸೀಕೆರೆ ತಾಲೂಕು ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರಿಗೆ ವಿಶೇಷ ಪೊಲೀಸ್ ಭದ್ರತೆ ಒದಗಿಸಲಾಗಿದೆ. ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿರುವ ವೇಳೆ ಸ್ವಾಮೀಜಿಗೆ ಪೊಲೀಸ್ ಭದ್ರತೆ ಒದಗಿಸಿರುವುದು ಅಚ್ಚರಿ ತಂದಿದೆ.
ಪೊಲೀಸ್ ಭದ್ರತೆ ಬೇಡ ಎಂದು ಸ್ವಾಮೀಜಿ ನಿರಾಕರಿಸಿದ್ದರೂ ಉನ್ನತಾಧಿಕಾರಿಗಳು ಸ್ವಾಮೀಜಿ ಮನವೊಲಿಸಿ ಭದ್ರತೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ 108 ರಿಂದ 112 ಸ್ಥಾನ ಬರಲಿದೆ ಎಂದು ನುಡಿದಿದ್ದ ಭವಿಷ್ಯ ನಿಜವಾಗಿತ್ತು. ಸರಕಾರ ರಚನೆ ಆಗುವ ಸಂದರ್ಭದಲ್ಲಿ ಮತ್ತೊಂದು ಭವಿಷ್ಯದ ಬಾಂಬ್ ಹಾಕಿದ್ದ ಸ್ವಾಮೀಜಿ, ಈ ಸರಕಾರಕ್ಕೆ ಆರು ತಿಂಗಳಲ್ಲೇ ಗಂಡಾಂತರ ಇದೆ. ಈ ಗಂಡಾಂತರ ತಪ್ಪಿಸಿಕೊಂಡರೂ ಮತ್ತೆ ಗಂಡಾಂತರ ತಪ್ಪಿದ್ದಲ್ಲ.
ಯಾವ ಕಾರಣಕ್ಕೂ ಬಿಜೆಪಿ ಸರಕಾರ ಅವಧಿಪೂರ್ಣ ಅಧಿಕಾರದಲ್ಲಿ ಇರುವುದಿಲ್ಲ ಎಂದು ಹೇಳಿದ್ದು ರಾಜಕೀಯವಾಗಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಸ್ವಾಮೀಜಿ ಮೌನ: ಈಗಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಕೋಡಿಮಠ ಸ್ವಾಮೀಜಿ ಮಾತನಾಡದೆ ಮೌನಕ್ಕೆ ಶರಣಾಗಿದ್ದಾರೆ. ದಿನಕ್ಕೊಂದು ರಾಜಕೀಯ ಬೆಳವಣಿಗೆ ಕಂಡುಬರುತ್ತಿರುವ ಈ ಸಂದರ್ಭದಲ್ಲಿ ಮೌನವಾಗಿದ್ದು ಸಹಕರಿಸುವಂತೆ ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ವಿನಂತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
(ದಟ್ಸ್ ಕನ್ನಡ ವಾರ್ತೆ)