ನನ್ನ ತಪ್ಪಾದರೂ ಏನು ಹೇಳಿ ? ನ್ಯಾ. ದಿನಕರನ್
ಮಂಗಳವಾರ, ನವೆಂಬರ್ 10, 2009, 13:13 [IST]
ಬೆಂಗಳೂರು, ನ . 10 : ನಾನು ಮೌನವಾಗಿರುವುದು ಆರೋಪ ಒಪ್ಪಿಕೊಂಡಂತಲ್ಲ. ನಾನು ನಿಮಗೆ ಏನು ಅನ್ಯಾಯ ಮಾಡಿದ್ದೇನೆ ? ನೀವೇ ನನ್ನ ರಕ್ಷಣೆಗೆ ಬಾರದಿದ್ದರೆ ನಾನೆಲ್ಲಿ ಹೋಗಬೇಕು ಎಂದು ನ್ಯಾಯಮೂರ್ತಿ ಪಿಡಿ ದಿನಕರನ್ ಅವರು ಭಾವುಕರಾಗಿ ಮಾತನಾಡಿದ್ದಾರೆ.
ನ್ಯಾಯಾಲಯ ಕಲಾಪ ಬಹಿಷ್ಕರಿಸಿದ್ದ ವಕೀಲರ ಗುಂಪು ನ್ಯಾ. ಪಿಡಿ ದಿನಕರನ್ ಹಾಗೂ ನ್ಯಾ. ಮೋಹನ್ ಶಾಂತನಗೌಡರ್ ಅವರಿದ್ದ ವಿಭಾಗೀಯ ಪೀಠಕ್ಕೆ ನುಗ್ಗಿ ದಾಂಧಲೆ ನಡೆಸಿದಾಗ ಮುಖ್ಯ ನ್ಯಾ. ದಿನಕರನ್ ಈ ರೀತಿ ಪ್ರತಿಕ್ರಿಯಿಸಿದರು. ಪೀಠದಲ್ಲಿ ಕುಳಿತು ಕಲಾಪ ನಡೆಸದಂತೆ ವಕೀಲರು ದಿಕ್ಕಾರದ ಘೋಷಣೆ ಕೂಗುತ್ತಿದ್ದಾಗ ಎದ್ದು ನಿಂತು ಎರಡು ನಿಮಿಷ ಮಾತನಾಡಲು ತಮಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಆದರೂ ವಕೀಲರು ಘೋಷಣೆ ಕೂಗುತ್ತಲೇ ಇದ್ದರು. ಇದರ ನಡುವೆಯೂ ಮಾತನಾಡಿದ ಅವರು ನಾನು ನಿಮ್ಮ ಬೇಡಿಕೆ, ಭಾವನೆಗಳನ್ನು ಗೌರವಿಸುತ್ತೇನೆ. ಸಂವಿಧಾನಾತ್ಮಕ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಯಾವುದೇ ಅಡ್ಡಿ ಬಂದರು ಕರ್ತವ್ಯ ನಿಭಾಯಿಸಲೇಬೇಕು. ಅದು ನನ್ನ ಕರ್ತವ್ಯ ಎಂದು ದಿನಕರನ್ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)