Oneindia Mobile
New Videos here on ur Mozilla -Get them!
ಶೋಭಾ ಸುವರ್ಣಟಿವಿ ಜುಗಲಬಂದಿ
ಮಂಗಳವಾರ, ನವೆಂಬರ್ 10, 2009, 18:02 [IST]

Shobha interview on Suvarna news channel
ಬೆಂಗಳೂರು, ನ.10: ನನ್ನ ಕಾರ್ಯಶೈಲಿಯ ಮೂಲಕ ಅಲ್ಪಅವಧಿಯಲ್ಲಿ ಜನಪ್ರಿಯಳಾಗಿದ್ದೇ ನನಗೆ ಮುಳುವಾಯಿತೇ? ಆದರೆ, ಒಂದು ಮಾತು, ನನ್ನ ರಾಜೀನಾಮೆ ಏತಕ್ಕಾಗಿ ಪಡೆದುಕೊಳ್ಳಲಾಯಿತು ಎಂಬುದು ನನಗೆ ಈವರೆಗೂ ಗೊತ್ತಿಲ್ಲ. ಉತ್ತರ ಹುಡುಕಾಟದಲ್ಲಿ ನಾನಿದ್ದೇನೆ. ಮುಂದಿನ ದಿನಗಳಲ್ಲಿ ನನಗೆ ಈ ಯಕ್ಷ ಪ್ರಶ್ನೆಗೆ ಉತ್ತರಗಳು ಸಿಗಬಹುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಖಾತೆ ಮಾಜಿ ಸಚಿವೆ ಹಾಗೂ ಯಡಿಯೂರಪ್ಪ ಅವರ ಬಲಗೈ ಬಂಟಿ ಶೋಭಾ ಕರಂದ್ಲಾಜೆ ಹೇಳಿದರು.

ಸುವರ್ಣ ನ್ಯೂಸ್ ಚಾನೆಲ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, ಸಮಾಜಸೇವಕಿಯಾಗಿ ನಾನು ಮುಂದುವರಿಯುವೆ ಎಂದರು. ನಾನಿಗಾಗಲೇ ಸಚಿವೆ ಸ್ಥಾನಕ್ಕೆ ರಾಜೀನಾಮೆ ನೀಡಿರುವೆ. ಕೆಲವರು ಆರೋಪ ಮಾಡುವಂತೆ ನಾನು ಬೇರೆ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕೆ ಒಂದೇ ಒಂದು ಉದಾಹರಣೆ ನೀಡಿದರೆ, ರಾಜಕೀಯದಿಂದಲೇ ನಿವೃತ್ತಿಯಾಗುವೆ ಎಂದು ಶೋಭಾ ಸವಾಲು ಹಾಕಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ 30-40 ವರ್ಷಗಳ ರಾಜಕೀಯ ಅನುಭವವಿದೆ. ಯಾವುದೋ ಒಂದು ಲಾಬಿಯಿಂದ ಯಡಿಯೂರಪ್ಪ ಹಾಗೂ ಬಿಜೆಪಿ ಪಕ್ಷವನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಇಂತಹ ಪಿತೂರಿ, ಷಡ್ಯಂತ್ರಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಅವರಿಗಿದೆ ಎಂದು ಕಡ್ಡಿಮುರಿದ ಹಾಗೆ ಹೇಳುವ ಮೂಲಕ ರೆಡ್ಡಿಗಳ ಅಡ್ಡಕ್ಕೆ ಲಗ್ಗೆ ಇಟ್ಟರು. ನನ್ನ ರಾಜಕೀಯ ಬದುಕಿನ ಯಶಸ್ವಿಗೆ ಮುಖ್ಯಮಂತ್ರಿ ಪಕ್ಷ, ಸಂಘ ಪರಿವಾರ ಮತ್ತು ಯಡಿಯೂರಪ್ಪ ಅವರು ಕಾರಣ. ಮಕ್ಕಳ ಹಾಗೆ ಯಡಿಯೂರಪ್ಪ ಅವರು ನಮ್ಮನ್ನು ಬೆಳೆಸಿದ್ದಾರೆ ಎಂದು ಶೋಭಾ ಹೇಳಿದರು.

ಒಬ್ಬ ಹೆಣ್ಣಿಗಾಗಿ, ಬರೀ ಶೋಭಾ ಕರಂದ್ಲಾಜೆ ಅವರಿಂದ ರಾಜೀನಾಮೆ ಪಡೆಯಲು 14 ದಿನಗಳ ರಾಜಕೀಯ ಕದನ ನಡೆದಿದೆ ಎನ್ನುವುದಾದರೆ ಅದು ನನಗೆ ಹೆಮ್ಮೆಯ ಸಂಗತಿ. ಆದರೆ, ಒಂದು ಮಾತು ಇಷ್ಟೆಲ್ಲಾ ಮಾಡುವ ಬದಲು ಶೋಭಾ ನೀನು ರಾಜೀನಾಮೆ ನೀಡು ಎಂದು ಹೇಳಿದ್ದರೆ ಸಾಕಿತ್ತು ಸರಕಾರದ ಒಳತಿಗಾಗಿ ರಾಜೀನಾಮೆ ನೀಡುತ್ತಿದ್ದೆ. ಇಷ್ಟೆಲ್ಲಾ ಬೇಕಿತ್ತಾ, ಪಕ್ಷಕ್ಕೆ ಮಸಿ ಬಳಿಯುವ ಕೆಲಸ ಏಕೆ ಮಾಡಿದ್ದು ಎಂದು ನೊಂದು ನುಡಿದರು.

ಪ್ರವಾಹದಿಂದ ಕಂಗಟ್ಟ ಜನರನ್ನು ರಕ್ಷಿಸಲು ನಾನು ಹಗಲಿರುಳು ದುಡಿದೆ. ಆದರೆ, ವಿಪರ್ಯಾಸ ನೋಡಿ, ನಾನು ವಿನಾಕಾರಣ ರಾಜಕೀಯ ಪ್ರವಾಹಕ್ಕೆ ತುತ್ತಾಗಬೇಕಾಯಿತು. ನನಗೆ ನಂಬಿಕೆ ಇದೆ. ಶೋಭಾ ಕರಂದ್ಲಾಜೆ ಸಚಿವೆಯಾಗಿ 18 ತಿಂಗಳ ಉತ್ತಮ ಕೆಲಸ ಮಾಡಿದ್ದಾಳೆ. ಇದೇ ನನಗೆ ಶ್ರೀರಕ್ಷೆ. ನನ್ನನ್ನು ಬೆಂಬಲಿಸುವ ಜನ ರಾಜ್ಯಾದ್ಯಂತ ಇದ್ದಾರೆ. ಅದೇ ನನಗೆ ಹೆಮ್ಮೆ, ಮಂತ್ರಿಯಲ್ಲದೆ ರಾಜ್ಯದ ಜನರ ವಿಶ್ವಾಸ ಗಳಿಸುವೆ ಎಂದು ಶೋಭಾ ವಿಶ್ವಾಸದಿಂದ ನುಡಿದರು.

ಒಬ್ಬ ಸಾಮಾನ್ಯ ಕುಟುಂಬದಿಂದ ಬಂದ ನನ್ನನ್ನು ಸಂಘ ಪರಿವಾರ ಮತ್ತು ಪಕ್ಷ ಇಷ್ಟು ಎತ್ತರಕ್ಕೆ ಬೆಳೆಸಿದೆ. ಆದರೆ, ರಾಜಕೀಯ ಗೊತ್ತಿಲ್ಲದ ನಾನು, ಇಷ್ಟು ಬೇಗ ರಾಜಕೀಯದಲ್ಲಿ ಎತ್ತರಕ್ಕೆ ಬೆಳೆದಿದ್ದು ಕೆಲವರು ಕಣ್ಣು ಕುಕ್ಕುವಂತೆ ಮಾಡಿತು. ಶಾಸಕಿಯಾದೆ, ಸಚಿವೆಯಾದೆ ಉತ್ತಮ ಕೆಲಸ ಮಾಡಿದೆ. ಆದರೆ, ಒಂದು ಪ್ರಾಮಾಣಿಕತೆಗೆ ಬೆಲೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪಕ್ಷಕ್ಕಾಗಿ ದುಡಿಯುವೆ ಅದರೆ, ಅಧ್ಯಕ್ಷ ಸ್ಥಾನಕ್ಕಾಗಲಿ, ಪ್ರಧಾನ ಕಾರ್ಯದರ್ಶಿ ಸ್ಥಾನದ ಅಕಾಂಕ್ಷಿಯಲ್ಲ. ನಾನು ಏನು ಮಾಡಬೇಕು ಎಂಬುದನ್ನು ಯೋಚಿಸಲು ಕಾಲಾವಕಾಶ ಬೇಕು. ನಾನು ಸ್ವಾರ್ಥಿ ಅಲ್ಲ, ರಾಜಕೀಯ ಸನ್ಯಾಸಿಯೂ ಅಲ್ಲ. ಪಕ್ಷ ಮತ್ತು ಸಂಘ ಪರಿಹಾರದ ಸಹಾಯದಿಂದ ಮೇಲಕ್ಕೆ ಬಂದಿರುವೆ. ನನ್ನ ಶ್ರದ್ಧೆ, ಶ್ರಮದಿಂದ ಮತ್ತೆ ಮಂತ್ರಿಗಿರಿ ಸಿಗಬಹುದು ಎಂಬ ಆಶಾವಾದ ವ್ಯಕ್ತಪಡಿಸಿದರು.

ನಾನು ಮಂತ್ರಿಗಿರಿಗೆ ರಾಜೀನಾಮೆ ನೀಡಿದ್ದು ಏಕೆ ಎಂದು ನನಗೇ ಗೊತ್ತಿಲ್ಲ. ಈ ಬಗ್ಗೆ ನಾನೇನೂ ಹೇಳಲು ಸಾಧ್ಯವಿಲ್ಲ. ಇದಕ್ಕೆ ಉತ್ತರಿಸಲು ನನ್ನಲ್ಲಿ ಉತ್ತರವಿಲ್ಲದ ಕಾರಣ ನಾನು ರಾಜ್ಯದ ಜನತೆಯ ಕ್ಷಮೆಯಾಚಿಸುವೆ ಎಂದು ಶೋಭಾ ಕರಂದ್ಲಾಜೆ ಅವರು ಈ ಸಂದರ್ಭದಲ್ಲಿ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)



»Home »News  »Entertainment  »Currency  »Free Classifieds  »Cricket  »TV Schedules  »In Theatres  »Weather  »Languages  »Horoscope 

© Greynium Information Technologies Pvt. Ltd.