Oneindia Mobile
ಕೋಡಾ ಹವಾಲದಲ್ಲಿ ಬಾಲಿವುಡ್ ತಾರೆಗಳು !!
ಬುಧವಾರ, ನವೆಂಬರ್ 11, 2009, 17:53 [IST]

Madhu Koda
ನವದೆಹಲಿ, ನ. 11 : ದೇಶಾದ್ಯಂತ ಕುತೂಹಲ ಕೆರಳಿಸಿರುವ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರ ಬಹುಕೋಟಿ ರೂಪಾಯಿಗಳ ಹವಾಲಾ ಹಗರಣದಲ್ಲಿ ಇಬ್ಬರು ಬಾಲಿವುಡ್ ನಟರು ಭಾಗಿಯಾಗಿದ್ದಾರೆಂಬ ಸುಳಿವು ದೊರೆತ ಹಿನ್ನಲೆಯಲ್ಲಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ರಾಂಚಿಯ ಅವರ ನಿವಾಸದಲ್ಲಿ ಮಂಗಳವಾರ (ನ. 10 ) ದಿನವಿಡೀ ಆದಾಯ ತೆರಿಗೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಆದಾಯ ತೆರಿಗೆ ಅಧಿಕಾರಿಗಳು ಸಂಗ್ರಹಿಸಿದ ಮಾಹಿತಿ ಪ್ರಕಾರ ಅವ್ಯವಹಾರದಲ್ಲಿ ಭಾಗಿಯಾಗಿರಬಹುದೆ೦ದು ಶಂಕಿಸಲಾಗಿರುವ ಇಬ್ಬರು ನಟರನ್ನು ವಿಚಾರಣೆಗೆ ಗುರಿ ಪಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ ನಟರ ಹೆಸರನ್ನು ಅಧಿಕಾರಿಗಳು ಬಹಿರಂಗ ಪಡಿಸಲಿಲ್ಲ. ಈ ಮಧ್ಯೆ ಕೋಡಾ ವಿಚಾರಣೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ವರದಿಯಾಗಿದೆ.

ಅಧಿಕಾರದಲ್ಲಿದ್ದ ಕೇವಲ ಎರಡು ವರ್ಷಗಳಲ್ಲಿ ಮಧು ಕೋಡಾ ಅಕ್ರಮವಾಗಿ 'ನಾಲ್ಕು ಸಾವಿರ ಕೋಟಿ' ಅವ್ಯವಹಾರ ನಡೆಸಿದ್ದಾರೆ. ಮೊದಲ ಸಲ ವಿಧಾನಸಭೆಗೆ ನಾಮಪತ್ರ ಸಲ್ಲಿಸುವಾಗ ಇವರಿಗಿದ್ದ ಆಸ್ತಿ ಅರ್ಧ ಕೋಟಿ ಕೂಡ ದಾಟಿರಲಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಪ್ರವೇಶಿಸಿರುವ ಇವರು ಸದ್ಯ ಯುಪಿಎ ಸರಕಾರದ ಬೆಂಬಲಿಗ. ಸಿಂಗಾಪುರದಿಂದ ಹಿಡಿದು ಥೈಲ್ಯಾಂಡ್ ಮತ್ತು ದುಬೈನಿಂದ ಹಿಡಿದು ಲೈಬೀರಿಯಾ ತನಕ ಅಕ್ರಮ ಹಣ ಹೂಡಿಕೆ ಮಾಡಿದ್ದಾರೆ. ಹವಾಲಾ ಜಾಲದಲ್ಲಿ ಕೋಡಾ ಮತ್ತು ಅವರ ಸಹೋದ್ಯೋಗಿಗಳು 4000 ಸಾವಿರ ಕೋಟಿ ವ್ಯವಹಾರ ನಡೆಸಿರುವುದಕ್ಕೆ ಸಾಕ್ಷಿಗಳು ಪತ್ತೆಯಾಗಿತ್ತು.

ದೆಹಲಿ, ಕೋಲ್ಕತ್ತಾ, ಮುಂಬೈ, ಬೆಂಗಳೂರು, ಲಖನೌ, ನಾಸಿಕ್, ಜಮ್ಷೆಡ್ಪುರ ಅಲ್ಲದೆ ಇತರ ರಾಷ್ಟ್ರಗಳಲ್ಲಿ ಕೂಡ ಸಾವಿರಾರು ಕೋಟಿ ಆಸ್ತಿಪಾಸ್ತಿ ಇವರ ಮತ್ತು ಇವರ ಸಹದ್ಯೋಗಿಗಳ ಹೆಸರಿನಲ್ಲಿ ಇರುವುದನ್ನು ಅಧಿಕಾರಿಗಳು ಪತ್ತೆ ಹೆಚ್ಚಿದ್ದಾರೆ. ಲೈಬೀರಿಯಾದಲ್ಲಿ 8.5 ಕೋಟಿ ಪಾವತಿಸಿ ಗಣಿಯನ್ನು ಕೂಡಾ ಖರೀದಿಸಿದ್ದಾರೆ. ಕೋಡಾ ಅವರ ಆಪ್ತರಾದ ವಿನೋದ್ ಕುಮಾರ್ ಸಿನ್ಹಾ ಮತ್ತು ಸಂಜಯ್ ಚೌಧುರಿ ವಿರುದ್ದ ಕೂಡ ಭ್ರಷ್ಟಾಚಾರದ ಪ್ರಕರಣಗಳು ದಾಖಲಾಗಿವೆ.

(ಏಜನ್ಸೀಸ್)



»Home  »Kannada  »News  »Movies  »Font Help  »Sitemap 

© Greynium Information Technologies Pvt. Ltd.