Oneindia Mobile
Photo Gallery!
ರಾಗಿ ರೊಟ್ಟಿ ಪ್ಲಸ್ ಕೆನೆ ಮೊಸರು
ಬುಧವಾರ, ನವೆಂಬರ್ 4, 2009, 16:29 [IST]

Ragi rotti
ಬೇಕಾಗುವ ಪದಾರ್ಥಗಳು:

ಅರ್ಧ ಕೆಜಿ ರಾಗಿ ಹಿಟ್ಟು
ಎರಡು ಲೋಟ ನೀರು ಮಜ್ಜಿಗೆ
ಹಸಿಮೆಣಸಿನಕಾಯಿ 10
ತೆಂಗಿನ ಕಾಯಿತುರಿ ಅರ್ಧ ಲೋಟ
ಈರುಳ್ಳಿ 4
ಕೊತ್ತಂಬರಿ ಸೊಪ್ಪು ಸ್ವಲ್ಪ
ಅಡುಗೆ ಎಣ್ಣೆ, ಪುಡಿಉಪ್ಪು

ವಿಧಾನ :

ಅಂಗಡಿಯಿಂದ ತಂದಿರುವ ಹಿಟ್ಟಿನ ಪ್ಯಾಕೆಟ್ಟಿನ ಮೇಲೆ ಶುದ್ಧ ರಾಗಿಹಿಟ್ಟು ಎಂಬ ಲೇಬಲ್ಲು ಅಂಟಿಸಿದ್ದರೂನೂವೆ, ಸಣ್ಣಕಣ್ಣಿನ ಜರಡಿಯಲ್ಲಿ ನೀವೊಮ್ಮೆ ಜರಡಿ ಆಡಿಸುವುದು ಉತ್ತಮ. ಆನಂತರ ಹಿಟ್ಟಿಗೆ ಸ್ವಲ್ಪ ನೀರು, ಮಜ್ಜಿಗೆ, ಉಪ್ಪು ಬೆರೆಸಿ ಕಲಸಿ 20 ನಿಮಿಷ ಹಾಗೇಯಿಡಿ. ಹಿಟ್ಟು ನೆನೆದುಕೊಂಡು ಮೃದು ಮಧುರವಾಗುತ್ತದೆ. ಆಮೇಲೆ, ಸಣ್ಣಗೆ ಹೆಚ್ಚಿಕೊಂಡ ಈರುಳ್ಳಿ, ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪನ್ನು ಹಿಟ್ಟಿಗೆ ಬೆರೆಸಿ. ಹಿಟ್ಟನ್ನು ಸಣ್ಣಸಣ್ಣ ಮುದ್ದೆಯಾಕಾರದ ಉಂಡೆಗಳನ್ನಾಗಿ ಮಾಡಿ. ಹಿಟ್ಟಿನುಂಡೆ ಅಥವಾ ಮುದ್ದೆಯ ಮೇಲೆ ಎರಡು ಚಮಚ ಎಣ್ಣೆ ಹಾಕಿ ಕೈಯಲ್ಲಿ ಚೆಂಡಿನ ರೀತಿ ಆಡಿಸಿ.

ಹಿಟ್ಟಿನ ಉಂಡೆಯನ್ನು ಹಂಚು, ತವ, ಕಾವಲಿ, ಬಾಣಲೆ ಅಥವಾ ನಾನ್ ಸ್ಟಿಕಿ ಪ್ಯಾನ್ ನಲ್ಲಿಟ್ಟು ತಟ್ಟಿಕೊಳ್ಳಿರಿ. ಜೋಡಿಸಿದ ನಾಕು ಬೆರಳ ಬೆನ್ನಿನಿಂದ ಹಿಟ್ಟು ತಟ್ಟಬೇಕು. ಹಿಟ್ಟು ನಿಧಾನವಾಗಿ, ಹರಿಯದಂತೆ ತವದ ತುಂಬ ಪಸರಿಕೊಳ್ಳಬೇಕು. ನಾಜೂಕಾಗಿ ತೆಳ್ಳಗೆ ತಟ್ಟಬೇಕು. ಈಗ ಹಂಚನ್ನು ಒಲೆಯ ಮೇಲಿಟ್ಟು ಬೇಯಿಸಿ. ಒಂದು ಚಮಚ ಎಣ್ಣೆ ಅಥವಾ ತುಪ್ಪವನ್ನು ರೊಟ್ಟಿಯಮೇಲೆ ಸಮನಾಗಿ ಹನಿಸಿರಿ. ತವದ ಮೇಲೆ ಮುಚ್ಚಳ ಮುಚ್ಚಿಡಿ. ಬೇಯುವ ರಾಗಿಯ ಹಬೆ ಎಕ್ಸ್ ಹಾಸ್ಟ್ ಫ್ಯಾನಿಗೆ ಹೋಗದೆ ರೊಟ್ಟಿಯ ಮೇಲೆ ಬಿದ್ದು ಬೇಯುವ ಕ್ರಿಯೆಯನ್ನು ರಚನಾತ್ಮಕವಾಗಿಸುತ್ತದೆ.

ಈ ಪ್ರಮಾಣದಲ್ಲಿ ರೊಟ್ಟಿ ಮಾಡಿದರೆ ಕನಿಷ್ಟಪಕ್ಷ 6 ರೊಟ್ಟಿಗಳನ್ನು ತಯಾರಿಸಬಹುದು. ನಿಮಗೆ ಮೂರು ಅವರಿಗೆ ಮೂರು. ಉಪ್ಪು, ಖಾರ, ತೆಂಗು, ಈರುಳ್ಳಿ ಹದವಾಗಿ ಬೆರೆತಿದ್ದರೆ ನೆಂಚಿಕೆ ಪದಾರ್ಥಗಳ ಹಂಗಿರುವುದಿಲ್ಲ. ಒಂದು ಕಪ್ ಕೆನೆ ಮೊಸರಿನ ಜತೆ ಸೇವಿಸಿದರಂತೂ ತುಂಬಾನೇ ಚೆನ್ನಾಗಿರತ್ತೆ.



»Home »News  »Entertainment  »Currency  »Free Classifieds  »Cricket  »TV Schedules  »In Theatres  »Weather  »Languages  »Horoscope 

© Greynium Information Technologies Pvt. Ltd.