Oneindia Mobile
New Videos here on ur Mozilla -Get them!
ಕಾಳುಮೆಣಸಿನ ಕೋಲಾರ ಚಿಕಿತ್ಸೆ
ಸೋಮವಾರ, ನವೆಂಬರ್ 9, 2009, 11:17 [IST]

Pepper Rasam
ಕರ್ನಾಟಕಕ್ಕೆ ತನ್ನದೇ ಆದ ಹವಾಮಾನ ಗುಣ ಎನ್ನುವಂಥದ್ದೇ ಇಲ್ಲ, ನೋಡಿ. ಎಲ್ಲರ ಬಾಯಲ್ಲೂ ಇವತ್ತು ಅದೇ ಮಾತು. ಚೆನ್ನೈನಲ್ಲಿ ಮಳೆಯಂತೆ ಅದಕ್ಕೆ ಬೆಂಗಳೂರಿನಲ್ಲಿ ಮೋಡ ಮುಸುಕಿದೆಯಂತೆ ಎಂದು ಮಾತನಾಡಿಕೊಳ್ಳುವವರೇ ಎಲ್ಲೆಲ್ಲೂ ಸಿಕ್ತಾರೆ. ಕಳೆದ ಏಳು ದಿವಸದಿಂದ 24 ಗಂಟೆ ಸೋನೆ ಮಳೆ, ಚಳಿ, ಸ್ವೆಟ್ಟರ್ರು ಮಂಕಿಕ್ಯಾಪ್ ಮಾರುವವರಗೆ ಮತ್ತೆ ಕ್ಲಿನಿಕ್ ಗಳಿಗೆ ಬಿಜಿನೆಸ್ ಜೋರು.14 ದಿವಸಗಳ ಈ ಬಿಜೆಪಿ ವನವಾಸದ ಬಿಕ್ಕಟ್ಟು ಬಗೆಹರಿದರೂ ಹಾಳಾದ್ದು ಕೊರೆಯುವ ಮಳೆಚಳಿ ಬಿಡ್ತಾಯಿಲ್ಲ ನೋಡ್ರೀ.

ಮೊದಲೇ ಸ್ಪಷ್ಟಪಡಿಸುತ್ತಿದ್ದೇನೆ. ಬೆಂಗಳೂರಿಗೆ ಸ್ವಂತ ಹವಾಗುಣ ಇದೆಯೋ ಇಲ್ಲವೋ ಎನ್ನುವ ಚರ್ಚಾಕೂಟಕ್ಕೆ ಸೋಮವಾರ ಬೆಳ್ಳಂಬೆಳಗ್ಗೆ ನಿಮ್ಮನ್ನು ನಾನು ಆಹ್ವಾನಿಸುತ್ತಿಲ್ಲ.ಕೋಲಾರ ಪ್ರಾಂತ್ಯದ ಒಂದು ಝುಂಯೆನ್ನುವ ಬೆಚ್ಚನೆ ಅಡುಗೆ, ಅದೇ ಅಪ್ಪಟ ಮೆಣಸಿನ ಸಾರು ಮಾಡಿ ಊಟಕ್ಕೆ ಕರಿತೀದೀನಿ, ಬರ್ತೀರಾ!

ಈಗ ನಾನು ನಿಮಗೆ ಕೋಲಾರದ ಮೆಣಸಿನ ಸಾರಿನ ಬಗ್ಗೆ ಹೇಳಿಕೊಡ್ತೀನಿ.ಇದು ನಮ್ಮ ವಂಶಪಾರಂಪರ್ಯದ ರೆಸಿಪಿ. ಸಾಮಾನ್ಯವಾಗಿ ಕೋಲಾರದಿಂದ ಹೋದ ಹಾಗೂ ಕೋಲಾರಕ್ಕೆ ಮನೆತುಂಬಿಸಿಕೊಂಡು ಬಂದ ಹೆಣ್ಣು ಮಕ್ಕಳು ಅದರ ರುಚಿಗೆ ಮಾರು ಹೋಗಿ ಆಸ್ಥೆಯಿಂದ ಕಲಿತು ತಮ್ಮ ವಂಶದ ಮುಂದುವರೆದ ಭಾಗಕ್ಕೆ ತಿಳಿಸಿಕೊಡುವ ಸಾರು :)

ಬೇಕಾದ ಸಾಮಗ್ರಿಗಳು :

ನೀರು ಮೂರು ಕಪ್, ಹುಣಿಸೆ ಹಣ್ಣು ಪುಟ್ಟ ನೆಲ್ಲಿ ಕಾಯಿ ಗಾತ್ರದಷ್ಟು ,ಕರಿಬೇವು ಎರಡು ಎಸಳು,ಜಜ್ಜಿದ ಬೆಳ್ಳುಳ್ಳಿ ಒಂದು ಪೂರ್ತಿ , ಕತ್ತರಿಸಿದ ಒಣಮೆಣಸಿನ ಕಾಯಿ ಎರಡು, ಪೂರ್ತಿ ಪುಡಿ ಮಾಡದ ಜೀರಿಗೆ-ಮೆಣಸು ಎರಡು ಸೇರಿ ಒಂದು ಚಮಚೆ,ಒಗ್ಗರಣೆಗೆ ತುಪ್ಪ ( ಕಂಪಲ್ಸರಿ),ರುಚಿಗೆ ತಕ್ಕಷ್ಟು ಉಪ್ಪು,ಕಾಲು ಸ್ಪೂನ್ ಜೀರಿಗೆ.

ಮಾಡುವ ವಿಧಾನ:

ಮೊದಲು ಹುಣಿಸೆ ಹಣ್ಣನ್ನು ನೆನೆಸಿಡಬೇಕು.ಬಾಣಲೆ ಅಥವಾ ಪಾತ್ರೆಯಲ್ಲಿ ತುಪ್ಪ ಹಾಕಿ ಅದು ಸ್ವಲ್ಪ ಕಾದ ಬಳಿಕ ಅದರಲ್ಲಿ ಸಾಸಿವೆಯನ್ನು ಚಿಟುಗುಟ್ಟಿಸಿ,ತಕ್ಷಣ ಪುಡಿಮಾಡಿದ ಜೀರಿಗೆ-ಮೆಣಸು ಹಾಕಿ ಒಂದು ಸರ್ತಿ ಅತ್ತಿತ್ತ ಮಾಡಿ,ಜಜ್ಜಿದ ಬೆಳ್ಳುಳ್ಳಿ ಅದ್ರಲ್ಲಿ ಹಾಕಿ,ಅದನ್ನು ಅತ್ತಿತ್ತಮಾಡಿ,ತಕ್ಷಣ ಮೆಣಸಿನಕಾಯಿ ಚೂರು ಹಾಕಿಕೊಳ್ಳಲಿ. ಕೊನೆಯಲ್ಲಿ ಕರಿಬೇವು ಜೀರಿಗೆ ಇವೆಲ್ಲವನ್ನೂ ಒಂದೆರಡು ಸಲ ಅತ್ತಿತ್ತ ಹುರಿಯಿರಿ.

ಅನಂತರ ನೀರನ್ನು ಹಾಕಿ,ಒಂದು ಕುದಿ ಬಂದ ತಕ್ಷಣ ಹುಣಿಸೆ ರಸ ಬೆರೆಸಿ.ಅದು ಚನ್ನಾಗಿ ಕುದ್ದಾಗ ಉಪ್ಪು ಬೆರಸಿ.ರುಚಿ ನೋಡಿ ಹುಳಿ ಅನ್ನಿಸಿದರೆ ಸ್ವಲ್ಪ ಬಿಸಿನೀರನ್ನು ಬೆರಸಬಹುದು.ಇದು ಅಡುಗೆ ಕಲಿಯ ಬಯಸುವವರ ಸಂಜೀವಿನಿ. ಆರೋಗ್ಯ ಇರಲಿ ಬಿಡಲಿ ಇದು ದೇಹಕ್ಕೆ ಉತ್ತಮ. ಚಳಿಗಾಲಕ್ಕೆ ಹೇಳಿಮಾಡಿಸಿದ ಸಾರು. ಬೇಸಿಗೆಯಲ್ಲಿ ಬಿಡದೆ ಸೇವಿಸುವ ರಸ, ಮಳೆಗಾಲದಲ್ಲೂ ತೊಂದರೆಯಿಲ್ಲದೆ ಜಮಾಯಿಸ ಬಹುದು. ಟ್ರೈ ಇಟ್ ಅಂಡ್ ಹ್ಯಾವ್ ಇಟ್.ಆದ್ರೆ ಒಳ್ಳೆಯ ಫಲಿತಾಂಶ ಸಿಗುತ್ತೆ. ಮತ್ತೆ ಇದು ರುಚಿಯಾದ ಮೆಣಸಿನ ಸಾರು.ಓಕೆ ಫ್ರೆಂಡ್ಸ್, ಟೇಕ್ ಕೇರ್.



»Home »News  »Entertainment  »Currency  »Free Classifieds  »Cricket  »TV Schedules  »In Theatres  »Weather  »Languages  »Horoscope 

© Greynium Information Technologies Pvt. Ltd.